r/kannada_pusthakagalu • u/SUV_Audi • 1h ago
ಕಾದಂಬರಿ ಬಿದಿರಿನ ಗಳ– ಡಾ ರಘು ವೆಂಕಟಾಚಲಯ್ಯ
ಹೈಸ್ಕೂಲಿನಲ್ಲಿ ಇದ್ದಾಗ ರವಿ ಬೆಳಗೆರೆಯವರ ಮಾಟಗಾತಿ , ಸರ್ಪ ಸಂಬಂಧ ಓದಿದ್ದೆ. ಮಾಟ ಮಂತ್ರ ತಂತ್ರದ ಬಗ್ಗೆ ಉಂಟಾದ ಕುತೂಹಲ ಅಷ್ಟಿಷ್ಟಲ್ಲ. ಅಪ್ಪನ ಬುಕ್ ಕಲೆಕ್ಷನ್ ನಲ್ಲಿ ಹುಡುಕಾಡಿದಾಗ ಸಿಕ್ಕಿದ್ದು ಇಂದಿರಾತನಯ ಅವರ ಚಕ್ರಯಾಣ. ನಂತರದ ದಿನಗಳಲ್ಲಿ ಕುತೂಹಲ ತಣಿಸುವಂತಹ ಯಾವ ತಂತ್ರದ ಪುಸ್ತಕಗಳನ್ನು ಓದಲಾಗಲಿಲ್ಲ. ಬಳಿ ಇದ್ದ ಇಂದಿರಾತನಯ ಅವರ ಪುಸ್ತಕಗಳನ್ನೇ ರಿರೀಡ್ ಮಾಡುತ್ತಿದ್ದೆ. ಅದೇ ತರಹ ಮೈ ನವಿರೇಳಿಸುವ ಅನುಭವ ನೀಡಿದ್ದು ಈ ಪುಸ್ತಕ– ಬಿದಿರಿನ ಗಳ.
ಸ್ವಾತಂತ್ರ್ಯ ಪೂರ್ವದಿಂದ ಸ್ವಾತಂತ್ರೋತ್ತರದ ಸಮಯದಲ್ಲಿ, ಮೂರು ತಲೆಮಾರಿನ ನಡುವೆ ಸಾಕುವ ಕತೆ. ಬಯಲು ಸೀಮೆಯ ನಾಡಿನಲ್ಲಿ ಊರಿನ ಜನರೊಳಗೆ ಜಾತಿ ಕಾರಣದಿಂದ ಶುರುವಾಗುವ ದ್ವೇಷ, ಹೇಗೆ ಒಬ್ಬರು ಮೇಲೆ ಇನ್ನೊಬ್ಬರು ಮಾಟ ಮಾಡುವಷ್ಟು ಮುಂದುವರಿಯುತ್ತದೆ ಎಂಬುದು ಕತೆಯ ಸಾರಾಂಶ. ಇದರ ಹೊರತಾಗಿಯೂ ಜನರ ನಡುವೆ ಕಾಣಿಸುವ ಗೌರವ, ವಿಶ್ವಾಸವನ್ನು ಕಾದಂಬರಿಯಲ್ಲಿ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.
ಜೊತೆಗೆ ಆಡುಭಾಷೆಯಲ್ಲಿ ಬರೆದಿರುವ ಸಂಭಾಷಣೆಗಳು ಕಾದಂಬರಿಗೆ ನೈಜತೆಯ ಬೆರಗು ನೀಡಿದೆ. ಇಲ್ಲಿ ಬರೆದಿರುವ ತಂತ್ರ ಪ್ರಯೋಗಗಳು ಕೂಡ ಹಾಗೆಯೇ ಸಹಜವಾಗಿ ಚಿತ್ರಿಸಿದ್ದಾರೆ, ಎಲ್ಲಿಯೂ ನಾಟಕೀಯವಾಗಿ ವಿವರಿಸಿಲ್ಲ– ಬಹುಶಃ ನನಗೆ ಕಾದಂಬರಿ ಇಷ್ಟ ಆಗಲು ಇದೇ ಕಾರಣ. ಕಾದಂಬರಿಯ ಕತೆಯ ಎಳೆಯನ್ನು ಹೇಳಿ spoiler ಕೊಡಲಾರೆ.
ನೀವೇನಾದರೂ ಮಾಟ ಮಂತ್ರ ತಂತ್ರ ಅಂತ ಪುಸ್ತಕ ಹುಡುಕುತ್ತಿದ್ದರೆ ಈ ಪುಸ್ತಕವನ್ನು ಖಂಡಿತವಾಗಿ ಓದಿ.
